Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ’ಟೆಕ್ ಮ್ಯಾಜಿಕ್’ ಏರ್ ಶೋ

ಮಂಗಳೂರಿನ ಶಕ್ತಿ ನಗರದಲ್ಲಿರುವ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ  ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ’ಟೆಕ್ ಮ್ಯಾಜಿಕ್’  ರೇಷ್ಮಾ ಮೆಮೋರಿಯಲ್ ಆಡಿಟೋರಿಯಂನಲ್ಲಿ ಇಂದು ನಡೆಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ NITK ಸುರತ್ಕಲ್ ಇಲ್ಲಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ ಖ್ಯಾತಿ ವರ್ಮಾ ಅವರು ದೀಪವನ್ನು ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮುಖ್ಯ ಅತಿಥಿಗಳು ಹಾಗೂ ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ಸೇರಿ ಡ್ರೋನ್ ಅನ್ನು ಹಾರಿಸುವ ಮೂಲಕ ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸಿದರು.

ಬಳಿಕ ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿದ ಅವರು ವಿಜ್ಞಾನ ಎನ್ನುವುದು ಕೇವಲ ಪಠ್ಯಪುಸ್ತಕದ ವಿಷಯವಲ್ಲ, ಅದೊಂದು ನಮ್ಮ ದೈನಂದಿನ ಬದುಕಿನ ಭಾಗವಾಗಿದೆ. ಅದೆಷ್ಟು ಸಾಧನೆಗಳನ್ನು ಮಾಡಿದ ವಿಜ್ಞಾನಿಗಳ ತಾಳ್ಮೆ ಮತ್ತು ಪರಿಶ್ರಮವನ್ನು ನಾವು ಈ ಸಂದರ್ಭದಲ್ಲಿ ನೆನಪಿಸಲೇ ಬೇಕಾಗಿದೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳಿಂದಲೇ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಆಸಕ್ತಿಯನ್ನು ತಮ್ಮದಾಗಿಸಿಕೊಳ್ಳಬೇಕು.  ಸಾಧನೆಯ ಹಾದಿಯಲ್ಲಿ ಸೋಲು ಗೆಲುವು ಎನ್ನುವುದು ಸಾಮಾನ್ಯವಾಗಿದೆ, ಸೋಲು ಎನ್ನುವುದು ಕೊನೆಯಲ್ಲ, ಅದು ಗೆಲುವಿನ ಒಂದು ಭಾಗವಾಗಿದೆ. ಹಾಗಾಗಿ ಎದುರಾಗುವ ಸವಾಲುಗಳಿಗೆ ಹೆದರದೆ ಧೈರ್ಯದಿಂದ ಮುನ್ನುಗ್ಗುತ್ತಿರಬೇಕು ಎಂದು ಹೇಳಿ, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಬಳಿಕ ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ಸೇರಿ ಮುಖ್ಯ ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

ಸೈಂಟ್ ಅಲೋಶಿಯಸ್ ಇಂಜಿನಿಯರಿಂಗ್ ಕಾಲೇಜು ಮಂಗಳೂರು ಇಲ್ಲಿನ ಸಹಾಯಕ ಡೀನ್ ಆಗಿರುವ ಡಾ. ಗ್ಲೆನ್ಸನ್ ಟೋನಿ ಇವರು ಹೊಸತಾಗಿ ಅನ್ವೇಷಿಸಿದ “ಬ್ಲೂಮ್ 9” ಎಂಬ ಮೊಬೈಲ್ ಆಪ್ ಬಗ್ಗೆ ಮಕ್ಕಳಿಗೆ ತಿಳಿಸಿದರು.  ನಂತರ ಮಕ್ಕಳೊಂದಿಗೆ ಸೆಮಿನಾರ್ ನಲ್ಲಿ ಭಾಗವಹಿಸಿ ಒಂದು ಹೊಸತಾದ ಉತ್ಪನ್ನವನ್ನು ಯಾವ ರೀತಿ ಅಭಿವೃದ್ಧಿಪಡಿಸಬೇಕು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಬಳಿಕ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿಯಾಗಿರುವ ಡಾ. ಕೆ. ಸಿ. ನಾೖಕ್‌ ಅವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಇದೊಂದು ಉತ್ತಮ ವೇದಿಕೆಯಾಗಿದೆ. ಶಕ್ತಿ ವಿದ್ಯಾ ಸಂಸ್ಥೆಯು ನಿರಂತರವಾಗಿ ಪ್ರೋತ್ಸಾಹವನ್ನು ವಿದ್ಯಾರ್ಥಿಗಳಿಗೆ ನೀಡಲು ಸಿದ್ಧವಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವೇದಿಕೆ ಮೇಲೆ ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾಗಿರುವ ಶ್ರೀ ರಮೇಶ್ ಕೆ, ಯೂಲೊ ಎಡ್ಯುಟೆಕ್ ಹಿರಿಯ ಶೈಕ್ಷಣಿಕ ವ್ಯವಸ್ಥಾಪಕರಾದ ಶ್ರವಣ್ ಶೆಟ್ಟಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ  ಮಂಗಳೂರಿನ ಪ್ರತಿಷ್ಠಿತ ಸಹ್ಯಾದ್ರಿ ಎಂಜಿನಿಯರಿಂಗ್  ಕಾಲೇಜು ಹಾಗೂ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಶಕ್ತಿ ವಿದ್ಯಾ ಸಂಸ್ಥೆಗೆ ಆಗಮಿಸಿ ತಮ್ಮ ತಮ್ಮ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದ್ದು ವಿಶೇಷವಾಗಿತ್ತು.

ಶಕ್ತಿ ರೆಸಿಡೆನ್ಶಿಯಯಲ್ ಶಾಲಾ ವಿದ್ಯಾರ್ಥಿಗಳಿಂದ AI  ವಿಷಯಕ್ಕೆ ಸಂಬಂಧಿಸಿದ ಸುಮಾರು 15 ಕ್ಕೂ ಹೆಚ್ಚಿನ  ಪ್ರಾಜೆಕ್ಟ್ ಗಳನ್ನು ಪ್ರದರ್ಶಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ನಯನ ಮನೋಹರವಾದ ಏರ್ ಶೋ ಕಾರ್ಯಕ್ರಮವು ನೆರೆದಿದ್ದ ಎಲ್ಲರನ್ನೂ ಆಕರ್ಷಿಸಿತು. ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಬಬಿತಾ ಸೂರಜ್ ಅವರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಶಕ್ತಿ ಶಾಲೆಯ ಶಿಕ್ಷಕಿ ಶ್ರೀಮತಿ ಮಧುರಾ ಕಾರ್ಯಕ್ರಮವನ್ನು ನಿರೂಪಿಸಿದರು.