ಮಂಗಳೂರು: ದಿನಾಂಕ 7-12-2024 ರಂದು ಶಕ್ತಿ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕೆರಿಯರ್ ಗೈಡೆನ್ಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಸ್ವಸ್ತಿಕಾ ನ್ಯಾಷನಲ್ ಸ್ಕೂಲ್‌ನ ಅಧ್ಯಕ್ಷರಾದ ರಾಘವೇಂದ್ರ ಹೊಳ್ಳರವರು ಆಗಮಿಸಿದರು. ವಿದ್ಯಾರ್ಥಿಗಳಿಗೆ ಮುಂದಿನ ಹಂತದ ವಿದ್ಯಾಭ್ಯಾಸ ಮತ್ತು ಅದರ ಆಯ್ಕೆ ಹೇಗೆ ಇರಬೇಕು ಎಂಬುದರ ಕುರಿತು ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡರು.
ಪಿ.ಯು.ಸಿ ವಿದ್ಯಾರ್ಥಿಗಳಿಗೆ ಮುಂದಿನ ಜೀವನದ ಗುರಿಯನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬ ವಿಚಾರವನ್ನು ಕೆಲವೊಂದು ಚಟುವಟಿಕೆಗಳ ಮೂಲಕ ತಿಳಿಸಿಕೊಟ್ಟರು. ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ಒಂದು ಗುರಿಯನ್ನು ಇಟ್ಟುಕೊಂಡು ಮುಂದುವರಿಯುವುದು ಬಹಳ ಮುಖ್ಯ ಎಂದು ಹೇಳಿದರು. ಕೋಳಿ ಮರಿಯ ಹಾಗಿನ ಬದುಕು ಬೇಡ ಬದಲಿಗೆ ತಮ್ಮದೇ ಸ್ವಂತ ಉದ್ಯಮದ ಮೂಲಕ ಯಶಸ್ಸನ್ನು ಸಾಧಿಸುವ ಹಲವು ದಾರಿಗಳ ಕುರಿತಾಗಿ ಚರ್ಚಿಸಿದರು.
ಸೋಲುವ ಭಯ ಕಾಡದ ಹಾಗೆ, ವೃತ್ತಿ ಜೀವನದಲ್ಲಿ ಯೋಜನೆಯನ್ನು ರೂಪಿಸಿಕೊಂಡು ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವುದನ್ನು ಇಂದಿನ ವಿದ್ಯಾರ್ಥಿಗಳು ಕಲಿಯಬೇಕು ಎಂದು ರಾಘವೇಂದ್ರ ಹೊಳ್ಳರವರು ವಿವರಿಸಿದರು.
ಪದವಿಪೂರ್ವ ಶಿಕ್ಷಣವನ್ನು ಆರಿಸಿಕೊಳ್ಳುವಾಗ ಬಹುಮುಖಿ ಅಭಿವೃದ್ದಿಯನ್ನು ರೂಪಿಸುವಂತಹ ವಿದ್ಯಾಸಂಸ್ಥೆಗಳನ್ನು ಆರಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದರು. ಪಿ.ಯು.ಸಿ ಶಿಕ್ಷಣ ಮುಗಿಸಿ ಮುಂದಿನ ಹಂತದ ವಿದ್ಯಾಭ್ಯಾಸಕ್ಕೆ ಇರುವ ಹಲವು ದಾರಿಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಪದವಿಪೂರ್ವ ಶಿಕ್ಷಣದ ನಂತರ ವಿದ್ಯಾಭ್ಯಾಸ ಮಾಡುವಾಗ ತಮ್ಮದೇ ಸ್ವಂತ ವೃತ್ತಿಯನ್ನು ಹೇಗೆ ಆರಂಭಿಸಬಹುದು ಎನ್ನುವುದನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ವಿವಿಧ ಸ್ಟಾರ್ಟ್ ಅಪ್‌ಗಳನ್ನು ಆರಂಭಿಸಿ ವಿದ್ಯಾರ್ಥಿ ದೆಸೆಯಿಂದಲೇ ಸ್ವಂತ ಉದ್ಯಮಕ್ಕೆ ತೊಡಗಿಸಿಕೊಂಡ ಹಲವು ವಿದ್ಯಾರ್ಥಿಗಳ ಕುರಿತು ಶಕ್ತಿ ಪದವಿಪೂರ್ವ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ವೃತ್ತಿ ಮತ್ತು ಶಿಕ್ಷಣ ಎರಡನ್ನು ಸರಿದೂಗಿಸಿಕೊಂಡು ಶಕ್ತಿ ಮತ್ತು ಯುಕ್ತಿಯಿಂದ ಸಾಧನೆಯನ್ನು ಮಾಡಿದರೆ ಇತರರಿಗಿಂತ ಭಿನ್ನವಾಗಿ ನಿಲ್ಲಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಸಾಧನೆಯ ಛಲ ಮತ್ತು ಸಾಧಿಸಲೇ ಬೇಕು ಎಂಬ ಹುಚ್ಚುತನವನ್ನು ಬೆಳೆಸಿಕೊಂಡಾಗಲೇ ವಿದ್ಯಾರ್ಥಿಯೊಬ್ಬ ಸಾಧಕನಾಗಿ ಹೊರ ಹೊಮ್ಮಲು ಸಾಧ್ಯ ಎಂಬುದನ್ನು ರಾಘವೇಂದ್ರ ಹೊಳ್ಳ ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.