ಮಂಗಳೂರು ಡಿ. 18 : ಶಕ್ತಿನಗರದಲ್ಲಿರುವ ಶಕ್ತಿ ವಿದ್ಯಾ ಸಂಸ್ಥೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಶಕ್ತಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲಾ ವಾರ್ಷಿಕೋತ್ಸವವು ವಿಜೃಂಭಣೆಯಿಂದ ಜರುಗಿತು.
ಈ ಸಮಾರಂಭದಲ್ಲಿ ವರ್ಧಮಾನ್ ವಿದ್ಯಾ ಸಂಸ್ಥೆಯ ಕಾರ್‍ಯದರ್ಶಿಗಳು ಹಾಗೂ ಸಂಸ್ಕೃತ ಭಾರತಿ, ಮಂಗಳೂರು ಇದರ ಉಪಾಧ್ಯಕ್ಷರೂ ಆಗಿರುವ ಶ್ರೀಮತಿ ಭಾರತಿ ಜೀವರಾಜ್ ಸೊರಕೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ದೀಪವನ್ನು ಬೆಳಗಿಸಿ ನಂತರ ಮಾತನಾಡಿದ ಅವರು ಈ ಭವ್ಯವಾದ ಶಕ್ತಿ ವಿದ್ಯಾ ಸಂಸ್ಥೆಯನ್ನು ಕಟ್ಟಿರುವ ಡಾ. ಕೆ. ಸಿ. ನಾೖಕ್ ಅವರು ಪಾರ್ಥನಂತೆ, ಭಗವಾನ್ ಶ್ರೀ ಕೃಷ್ಣನು ಸಂಸ್ಥಾಪಕರಿಂದ ಇಂತಹ ಅಧ್ಬುತವಾದ ಕೆಲಸವನ್ನು ಸಮಾಜದ ಒಳಿತಿಗಾಗಿ ಮಾಡಿಸುತ್ತಿದ್ದಾನೆ. ಆರಂಭದಲ್ಲಿ ಸಾಕಷ್ಟು ಸವಾಲುಗಳನ್ನು ಕಷ್ಟಗಳನ್ನು ಅನುಭವಿಸಿದರೂ ಕೂಡಾ ಅವರು ಹೊಂದಿದ್ದ ಗುರಿಯನ್ನು ಛಲವಾಗಿ, ತಪಸ್ಸಾಗಿ ಸ್ವೀಕರಿಸಿದರು. ಇದೆಲ್ಲ ಭಗವಾನ್ ಶ್ರೀ ಕೃಷ್ಣನ ಪ್ರೇರಣೆಯಾಗಿದೆ. ಒಂದು ಶಕ್ತಿ ನಮ್ಮೆಲ್ಲರನ್ನು ಸ್ಪೂರ್ತಿದಾಯಕರನ್ನಾಗಿ ಮಾಡುತ್ತದೆ. ವಿದ್ಯಾರ್ಥಿಗಳೆಂದರೆ ವಸ್ತುಗಳನ್ನು ತುಂಬಿಸಿಡುವ ಪಾತ್ರೆಗಳಲ್ಲ ಅವರು ಪ್ರಜ್ವಲಿಸುವಂತಹ ದೀವಿಗೆಗಳು. ಶಿಕ್ಷಕನಾದವನು ಅವರನ್ನು ಪ್ರಜ್ವಲಿಸುವಂತೆ ಮಾಡಬೇಕು. ಶಿಕ್ಷಕನ ಕೆಲಸ ಎಂದರೆ ಬೆಳಕನ್ನು ಎಲ್ಲೆಡೆ ಹರಡಿಸುವುದಾಗಿದೆ. ಅದಕ್ಕೆ ನಮ್ಮ ಗುರುಕುಲ ಪದ್ದತಿಯಲ್ಲಿ ಹೆಚ್ಚಾಗಿ ಬೋದಿಸುವಂತಹ ಮಂತ್ರ ಓಂ ಸಹನಾಭವತು. ಇನ್ಯಾವ ಪಾಶ್ಚಾತ್ಯ ಶಿಕ್ಷಣವು ಕೂಡಾ ಇಂತಹ ಪ್ರಾರ್ಥನೆಯನ್ನು ಕೊಡಲು ಸಾಧ್ಯವಿಲ್ಲ.
ವಿವೇಕಾನಂದರು ಹೇಳುವ ಪ್ರಕಾರ ಪ್ರಯತ್ನ ಮಾಡುವವರಿಗೆ ಸಹಾಯಮಾಡುವುದು. ಅಸೂಯೆ ಪಡದೆ ಬದುಕುವುದು. ಈ ರೀತಿಯ ಜೀವನದಲ್ಲಿ ವಿದ್ಯಾರ್ಥಿಗಳು ರೂಢಿಸಿಕೊಂಡರೆ ವಿದ್ಯಾರ್ಥಿಗಳ ಜೀವನವನ್ನು ದೂರದವರೆಗೂ ಕರೆದುಕೊಂಡು ಹೋಗುತ್ತದೆ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
6 ರಿಂದ 10 ನೇ ತರಗತಿಯ ವರೆಗೆ 2025-26 ನೇ ಶೈಕ್ಷಣಿಕ ವರ್ಷದಿಂದ ಶಕ್ತಿ ಫೌಂಡೇಶನ್ ಕೋರ್ಸ್‌ನ್ನು ಪರಿಚಯಿಸುವ ಶಕ್ತಿ ಫೌಂಡೆಶನ್ ಕೈಪಿಡಿಯನ್ನು ಮುಖ್ಯ ಅತಿಥಿಗಳಾದ ಶ್ರೀಮತಿ ಭಾರತಿ ಜೀವರಾಜ್ ಸೊರಕೆ ವೇದಿಕೆಯಲ್ಲಿ ಬಿಡುಗಡೆ ಮಾಡಿದರು. ಈ ಕೈಪಿಡಿಯ ಕುರಿತಂತೆ ಶಕ್ತಿ ವಿದ್ಯಾಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ ಕೆ. ಅವರು ಮಾತನಾಡಿ ಈಗಾಗಲೇ ನಮ್ಮ ಶಕ್ತಿ ವಿದ್ಯಾಸಂಸ್ಥೆಯು 2025-26 ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಆರಂಭವಾಗುವಂತಹ 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಶಕ್ತಿ ಫೌಂಡೆಶನ್ ಸಂಬಂಧಪಟ್ಟ ವಾರ್ಷಿಕ ಯೋಜನೆಯುಳ್ಳ ಕೈಪಿಡಿಯನ್ನು ಅಧಿಕೃತವಾಗಿ ಬಿಡುಗಡೆಮಾಡಲಾಯಿತು. ಮುಂದಿನ ದಿನಮಾನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಮಕ್ಕಳನ್ನು ತಯಾರು ಮಾಡುವ ನಿಟ್ಟಿನಲ್ಲಿ ಶಕ್ತಿ ವಿದ್ಯಾ ಸಂಸ್ಥೆ ನೂತನ ಹೆಜ್ಜೆ ಇಟ್ಟಿದೆ. ದೇಶದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಜೆ.ಇ.ಇ. ಹಾಗೂ ನೀಟ್ ಪರೀಕ್ಷೆಗಳನ್ನು ಬರೆಯುತ್ತಾರೆ. ಅದಕ್ಕಾಗಿ ನಮ್ಮ ಮಕ್ಕಳಿಗೆ 6 ನೇ ತರಗತಿಯಿಂದ ಈ ಫೌಂಡೇಶನ್ ಕೋರ್ಸ್‌ನ ತರಬೇತಿಯನ್ನು ನೀಡಬೇಕೆಂಬುದು ನಮ್ಮ ಸಂಸ್ಥೆಯ ಸಂಸ್ಥಾಪಕರಾದ ಕೆ.ಸಿ.ನಾೖಕ್ ರವರ ಕನಸು. ಆ ಕನಸು ನನಸು ಮಾಡಲು ಸಂಸ್ಥೆಯ ಎಲ್ಲಾ ಶಿಕ್ಷಕರು ಸನ್ನದ್ದರಾಗಿ ಮುಂದಿನ ವರ್ಷಕ್ಕೆ ತರಬೇತಿ ಮತ್ತು ಪರೀಕ್ಷೆಯನ್ನು ನಡೆಸುವ ಯೋಜನೆ ಹಾಕಿಕೊಂಡಿದ್ದಾರೆ. 10ನೇ ತರಗತಿಯ ನಂತರ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾಭ್ಯಾಸಕ್ಕಾಗಿ ಬೇಕಾಗಿರುವ ಎಲ್ಲಾ ವ್ಯವಸ್ಥೆಯನ್ನು ಆಡಳಿತ ಮಂಡಳಿ ನೀಡುತ್ತದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ. ನಾೖಕ್ ಅವರು ಮಾತನಾಡಿ ಮೊದಲು ವಿದ್ಯಾರ್ಥಿಗಳ ಬೆಳವಣಿಗೆ, ಶಿಕ್ಷಕರ ಬೆಳವಣಿಗೆ ಎರಡೂ ಬೆಳವಣಿಗೆಗಳ ಮೂಲಕ ಸಂಸ್ಥೆಯ ಬೆಳವಣಿಗೆ ಇದು ನಮ್ಮ ಮೂಲಮಂತ್ರ. ಈ ನಿಟ್ಟಿನಲ್ಲಿ ಹಲವಾರು ತಜ್ಞರ ಮಾರ್ಗದರ್ಶನದಲ್ಲಿ ಈ ಫೌಂಡೇಶನ್ ಕೋರ್ಸ್‌ನ್ನು ನಾವು ಆರಂಭಿಸುತ್ತಿದ್ದೇವೆ. ಈಗಾಗಲೇ ಬಿಡುಗಡೆಗೊಂಡ ಕೈಪಿಡಿಯು ವಿದ್ಯಾರ್ಥಿಗಳಿಗೆ ಉತ್ತಮವಾದುದನ್ನು ಸಾಧಿಸಲು ಸಹಾಯವಾಗುತ್ತದೆ ಎಂದು ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಆಟೋಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಶಕ್ತಿ ಪ್ರಾಥಮಿಕ ಶಾಲೆಯ ವರದಿ ವಾಚನವನ್ನು ಸಂಸ್ಥೆಯ ಪ್ರಾಂಶುಪಾಲೆ ಬಬಿತಾ ಸೂರಜ್‌ರವರು ನೆರವೇರಿಸಿದರೆ, ಶಕ್ತಿ ಪೂರ್ವ ಪ್ರಾಥಮಿಕ ಶಾಲಾ ವರದಿ ವಾಚನವನ್ನು ಶ್ರೀಮತಿ ಸುಷ್ಮಾರವರು ನೇರವೇರಿಸಿದರು. ಈ ಸಂಧರ್ಭದಲ್ಲಿ ಶಕ್ತಿ ವಸತಿ ಪ. ಪೂ. ಕಾಲೇಜು ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತವನ್ನು ಸಂಯೋಜಕಿ ಸುಷ್ಮಾರವರು ನೇರವೇರಿಸಿದರೆ, ಪ್ರಿಯದರ್ಶಿನಿಯವರು ಧನ್ಯವಾದವನ್ನು ಸಲ್ಲಿಸಿದರು. ಹಾಗೂ ಕಾರ್ಯಕ್ರಮ ನಿರೂಪಣೆಯನ್ನು ಶಿಕ್ಷಕಿ ಅನೆಟ್ ಇವರು ನೆರವೇರಿಸಿದರು. ಸಭಾ ಕಾರ್ಯಕ್ರಮದ ನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ಪೋಷಕರ ಮನಸ್ಸನ್ನು ಸೂರೆಗೊಂಡಿತು.