ಶಕ್ತಿ ನಗರದಲ್ಲಿರುವ ಶಕ್ತಿ ವಿದ್ಯಾಸಂಸ್ಥೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಶಕ್ತಿ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವವು ವಿಜೃಂಭಣೆಯಿಂದ ಜರುಗಿತು.
ಈ ಸಮಾರಂಭದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಚಾಣಕ್ಯ ವಿಶ್ವವಿದ್ಯಾಲಯದ ಕುಲಸಚಿವರು (ಪರೀಕ್ಷಾಂಗ) ಪ್ರೋ. ಸಂದೀಪ್ ನಾಯರ್ ಮುಖ್ಯ ಅತಿಥಿಯಾಗಿ ನೇರವೇರಿಸಿದರು. ಶ್ರೀಯುತರನ್ನು ಶಕ್ತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಾಂಪ್ರದಾಯಿಕವಾಗಿ ಕಳಸದ ಮೂಲಕ ಸ್ವಾಗತಿಸಿದರು. ತೆಂಗಿನ ಕೊಂಬನ್ನು ಅರಳಿಸುವ ಮೂಲಕ ವಾರ್ಷಿಕೋತ್ಸವಕ್ಕೆ ಮೆರುಗು ನೀಡಿದರು. ನಂತರ ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಕಾಲೇಜಿನ ಪ್ರತಿಭಾವಂತ ಶೈಕ್ಷಣಿಕ ಮತ್ತು ಕ್ರೀಡಾ ಸಾಧಕರನ್ನು ಗುರುತಿಸಿ ಈ ಸಂಧರ್ಭದಲ್ಲಿ ಸನ್ಮಾನಿಸಲಾಯಿತು.
ಉದ್ಘಾಟಕರಾಗಿ ಆಗಮಿಸಿದ ಸಂದೀಪ್ ನಾಯರ್ ಸಭೆಯನ್ನು ಉದ್ದೇಶಿಸಿ ಮಾತನಾಡಿ, 2500 ವರ್ಷಗಳ ಹಿಂದೆ ರಚಿತವಾದ ಚಾಣಕ್ಯನ ನೀತಿ ಶಾಸ್ತ್ರದ ಪುಸ್ತಕವನ್ನು ಉಲ್ಲೇಖಿಸಿ ಅದರ ಪ್ರಸ್ತುತತೆಯನ್ನು ಸಭಿಕರಿಗೆ ತಿಳಿಸಿದರು.
ಆಧುನಿಕ ಶಿಕ್ಷಣ ಪದ್ಧತಿಗಳು ವಿದ್ಯಾರ್ಥಿ ಸಮುದಾಯದಲ್ಲಿ ವಿಶ್ವಾಸ ದಂತಹ ಮಾನವೀಯ ಗುಣಗಳನ್ನು ಬೆಳೆಸುವಲ್ಲಿ ಸೋಲುತ್ತಿದೆ. ಶಕ್ತಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದ ಆಚರಣೆಯಲ್ಲಿ ಸತ್ವಯುತ ಸಾಂಸ್ಕೃತಿಕ ಅಂಶಗಳನ್ನು ಗುರುತಿಸಿದ ಡಾ. ಸಂದೀಪ್ ನಾಯರ್ ಈ ವಾರ್ಷಿಕೋತ್ಸವದ ಆಚರಣೆಯು ಸಂಸ್ಥೆಯ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.
ಧರ್ಮ, ಸತ್ಯ, ಜ್ಞಾನ, ಇಚ್ಛಾ, ಕ್ರಿಯಾ, ವಿನಯ, ಆನಂದದ ಬಗ್ಗೆ ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ತನ್ನ ಕಲಿಕೆಯಲ್ಲಿರುವ ಬದ್ಧತೆಯೇ ನಿಜವಾದ ಧರ್ಮ, ನಿರಂತರ ಹುಡುಕಾಟದ ಪಯಣವೇ ಸತ್ಯ, ತಿಳುವಳಿಕೆಯೇ ಜ್ಞಾನವಲ್ಲ ಅನುಭವವೇ ನಿಜವಾದ ಜ್ಞಾನ, ನಿರಂತರವಾಗಿ ಪ್ರಶ್ನಿಸುವುದರಿಂದ ಜ್ಞಾನವು ವೃದ್ಧಿಯಾಗುತ್ತದೆ, ತನ್ನ ನಿರ್ವಹಣಾ ಸಾಮರ್ಥ್ಯ ಗಿಂತಲೂ ಮಿಗಿಲಾದುದು ನಿಜವಾದ ಇಚ್ಛೆ, ಸಂಪೂರ್ಣವಾದ ತೊಡಗಿಸಿಗೊಳ್ಳುವಿಕೆಯಿಂದ ನಿಜವಾದ ಕ್ರಿಯೆ ಅಭಿವ್ಯಕ್ತಿಗೊಳ್ಳುತ್ತದೆ, ವಿನಯವೇ ವಿದ್ಯೆಗೆ ನಿಜವಾದ ಭೂ?ಣ, ಚೈತನ್ಯಶೀಲವಾದುದೇ ನಿಜವಾದ ಆನಂದ ಎಂದು ಹೇಳಿದರು.
ಈ ವಾರ್ಷಿಕೋತ್ಸವದ ಅಧ್ಯಕ್ಷ ಸ್ಥಾನವನ್ನಲಂಕರಿಸಿದ ಶಕ್ತಿ ವಿದ್ಯಾಸಂಸ್ಥೆಯ ಸಂಸ್ಥಾಪಕರು, ಆಡಳಿತಾಧಿಕಾರಿಯೂ ಆದ ಡಾ.ಕೆ.ಸಿ.ನಾೖಕ್‌ರವರು ಮಾತನಾಡಿ, ಒಂದು ವಿದ್ಯಾಸಂಸ್ಥೆ ಬೆಳೆಯಲು, ಅದರ ಏಳಿಗೆಯಲ್ಲಿ ವಿದ್ಯಾರ್ಥಿಗಳು ಬಹಳ ಮಹತ್ತರ ಪಾತ್ರ ವಹಿಸುತ್ತಾರೆ. ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ ವಿಭಾಗ, ಇಂಜಿನಿಯರಿಂಗ್ , ವೈಜ್ಞಾನಿಕ ಹಾಗೂ ಇತರ ಉನ್ನತ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಬೇಕೆಂಬುದು ನನ್ನ ಕನಸಾಗಿದೆ ಎಂದು ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಪ್ರಧಾನ ಸಲಹೆಗಾರರಾದ ರಮೇಶ್ ಕೆ. ರವರು ಶಕ್ತಿ ವಿದ್ಯಾ ಸಂಸ್ಥೆ ಪ್ರಾರಂಭವಾಗಿ ಆರುವರೆ ವರ್ಷಗಳಾಗಿದ್ದು, ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ದೇಶದ ವಿವಿಧ ಉನ್ನತ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯಾಗಿದೆ. ಶಕ್ತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಶ್ಲಾಘನೀಯವಾಗಿದೆ.
ಈ ಸಂದರ್ಭದಲ್ಲಿ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆಯಾದ ಬಬಿತಾ ಸೂರಜ್‌ರವರು ಉಪಸ್ಥಿತರಿದ್ದರು. ಸ್ವಾಗತ ಭಾಷಣವನ್ನು ಶಿಕ್ಷಕಿ ಚೈತ್ರರವರು ನೆರವೇರಿಸಿದರೆ, ಶಿಕ್ಷಕಿ ಮೆಲಿಸ್ಸ ಆಲ್ಮ ಲೂವಿಸ್‌ರವರು ವಂದಿಸಿದರು, ಶಿಕ್ಷಕಿ ಶ್ರೀಮತಿ ಯಶಸ್ವಿನಿಯವರು ನಿರೂಪಿಸಿದರು.