ಶಕ್ತಿನಗರದ ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಯುಕೆಜಿ ವಿದ್ಯಾರ್ಥಿಗಳ ಜ್ಯೋತಿ ಪ್ರದಾನ್- ಪದವಿ ಪ್ರದಾನ ಸಮಾರಂಭವು ಯಶಸ್ವಿಯಾಗಿ ಜರುಗಿತ್ತು. ಶಾಲೆಯ ಪುಟ್ಟ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ವರ್ಷಕ್ಕೆ ಹೊಸ ಸೇರ್ಪಡೆಯ ಮಹತ್ವದ ಕ್ಷಣ ಇದಾಗಿತ್ತು.
ಕಾರ್ಯಕ್ರಮವನ್ನು ಪ್ರಾರಂಭದಲ್ಲಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಗಿತ್ತು. ನಂತರ ದೀಪ ಜ್ಯೋತಿಯನ್ನು ಪ್ರತಿ ಮಗುವಿಗೂ ನೀಡಲಾಯಿತು. ಇದು ಭಾರತೀಯ ಸಂಪ್ರದಾಯದಂತೆ ಜ್ಞಾನ ಮತ್ತು ವಿದ್ಯೆಯ ಪ್ರತೀಕ. ನಂತರ ಮಕ್ಕಳು ಹೇ ಶಾರದೆ ಈ ಭಕ್ತಿಗೀತೆಯನ್ನು ಹಾಡಿದರು. ದೇವಿ ಸರಸ್ವತಿಯ ಆಶೀರ್ವಾದದೊಂದಿಗಿನ ಈ ಪವಿತ್ರ ಕ್ಷಣ ಎಲ್ಲರ ಮನಸೂರೆಗೊಂಡಿತು.
ನಂತರ, ನಮ್ಮ ಪುಟ್ಟ ಪದವೀಧರರು ವೇದಿಕೆಗೆ ಬಂದು ಅತಿಥಿಗಳಿಂದ ಪದವಿ ಪ್ರಮಾಣಪತ್ರಗಳನ್ನು ಸ್ವೀಕರಿಸಿದರು. ಅವರ ಉತ್ಸಾಹ ಮತ್ತು ಗಂಭೀರತೆ, ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ನೀಡಿದ ಸಂಸ್ಕಾರವನ್ನು ಪ್ರತಿಬಿಂಬಿಸಿತು.
ಇದರ ಜೊತೆಗೆ ಶ್ಲೋಕ ರಾಮ್ ಭಂಡಾರಿ ಅವರು ಅಂತರ್ ಜಿಲ್ಲಾ ಈಜು ಸ್ಪರ್ಧೆಯಲ್ಲಿ ಸುವರ್ಣ ಮತ್ತು ರಜತ ಪದಕಗಳನ್ನು ಗೆದ್ದು, ನಮ್ಮ ಶಾಲೆಗೆ ಹೆಮ್ಮೆ ತಂದಿರುವುದರವುದನ್ನು ಗುರುತಿಸಿ ಅವರಿಗೆ ಪದಕ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಇನ್ನು ಎಲ್‌ಕೆಜಿ ವಿದ್ಯಾರ್ಥಿಗಳ ಕುಣಿತ ಪ್ರದರ್ಶನವು ಎಲ್ಲರ ಮನಸ್ಸನ್ನು ಗೆದ್ದು, ಆಕರ್ಷಕ ಹಾಗೂ ಸಂಭ್ರಮಭರಿತ ವಾತಾವರಣ ಸೃಷ್ಟಿಸಿತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪೆಟ್ರಿಷಿಯಾ ಪಿಂಟೋ ಮಾತನಾಡಿ ನಾವು ಮಕ್ಕಳಿಗೆ ಕೊಡುವ ವಿದ್ಯೆಯಿಂದ ಅವರು ಅನೇಕ ವಿಷಯವನ್ನು ಕಲಿತಿರುವುದನ್ನು ನಾವು ನೋಡಿದ್ದೇವೆ. ಪುಟ್ಟ ಮಕ್ಕಳು ವೇದಿಕೆಯಲ್ಲಿ ನಿಂತು ಅವರ ಅಭಿಪ್ರಾಯವನ್ನು ತಿಳಿಸಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಇವರನ್ನು ತಯಾರು ಮಾಡಿರುವ ಶಿಕ್ಷಕರು ನಿಜವಾಗಿಯೂ ಅಭಿನಂದನೀಯರು ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕರಾದ ಡಾ.ಕೆ.ಸಿ.ನಾೖಕ್ ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳ ಬುದ್ದಿವಂತಿಕೆಯನ್ನು ನೋಡಿದಾಗ ಇವರು ಮುಂದಿನ ದಿನಗಳಲ್ಲಿ ದೇಶದ ಸಂಪತ್ತಾಗುತ್ತಾರೆ ಎಂಬ ವಿಶ್ವಾಸ ನನಗಿದೆ. ಸಣ್ಣ ಪ್ರಾಯದಲ್ಲಿ ಇಷ್ಟು ಚೆನ್ನಾಗಿ ಅವರು ವೇದಿಕೆಯಲ್ಲಿ ಮಾತನಾಡುವುದು ಹಾಗೂ ಸಂಸ್ಕಾರಯುತವಾಗಿರುವುದು ಒಳ್ಳೆಯ ಸಂದೇಶವನ್ನು ನೀಡುತ್ತದೆ ಎಂದು ಹೇಳಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಸಂಸ್ಥೆಯ ಪ್ರಧಾನ ಸಲಹೆಗಾರರಾದ ಶ್ರೀ ರಮೇಶ್ ಕೆ. , ಶಕ್ತಿ ರೆಸಿಡೆನ್ಯಿಯಲ್ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಬಬಿತಾ ಸೂರಜ್ ಮತ್ತು ಪೂರ್ವ ಪ್ರಾಥಮಿಕ ಶಾಲೆಯ ಸಂಯೋಜಕಿ ಶ್ರೀಮತಿ ಸುಷ್ಮಾ ಸತೀಶ್ ಇವರ ಉಪಿಸ್ಥಿತರಿದ್ದರು.