ಕರ್ನಾಟಕ ಸರಕಾರ ಚುನಾವಣಾ ಆಯೋಗ, ಸ್ವೀಪ್ ಸಮಿತಿ, ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ, ಶಕ್ತಿ ಪದವಿ ಪೂರ್ವ ಕಾಲೇಜು ಶಕ್ತಿನಗರ, ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 24 ರಂದು ಶಕ್ತಿ ಶಿಕ್ಷಣ ಸಂಸ್ಥೆಯ ರೇಷ್ಮಾ ಮೆಮೋರಿಯಲ್ ಸಭಾಭವನದಲ್ಲಿ ರಾಷ್ಟ್ರೀಯ ಮತದಾನ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳು ನಡೆದವು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನೈಋತ್ಯ ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ ಮತದಾನದ ಮಹತ್ವದ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ನಳಂದ ವಿಶ್ವವಿದ್ಯಾನಿಲಯದಲ್ಲಿದ್ದ ಗ್ರಂಥಗಳ ಮಹತ್ವ, ಕಂಪ್ಯೂಟರ್ ಭಾಷೆಗೆ ಅತಿ ಹತ್ತಿರದ ಭಾಷೆಯಾಗಿ ಸಂಸ್ಕೃತ, ನೌಕಯಾನಶಾಸ್ತ್ರ, ಬೀಜಗಣಿತ, ಚೆಸ್ ಕ್ರೀಡೆ ಮೊದಲಾದವುಗಳಿಗೆ ಭಾರತವೇ ಪ್ರಪ್ರಥಮ ಕೊಡುಗೆಯನ್ನು ನೀಡಿದೆ ಎಂದು ಹೇಳಿದರು. 1857 ರಲ್ಲಿ ಪ್ಯಾರಾಸಿಟಮಲ್ ಕಂಡುಹಿಡಿಯುವುದರ ಮೊದಲು ಭಾರತದಲ್ಲಿದ್ದ ಆಯುರ್ವೇದ ಶಾಸ್ತ್ರ, 1896 ರ ಮೊದಲು ಭಾರತದಲ್ಲಿ ಮಾತ್ರ ಕಂಡುಹಿಡಿಯಲಾಗುತ್ತಿದ್ದ ವಜ್ರ- ಇವೆಲ್ಲವೂ ಜಗತ್ತಿಗೆ ಭಾರತ ನೀಡಿದ ಕೊಡುಗೆಗಳು ಮತ್ತು ಅನೇಕ ಸಾಧನೆಗಳಲ್ಲಿ ಭಾರತವೇ ಪ್ರಪ್ರಥಮವಾಗಿತ್ತು ಎಂದು ಹೇಳಿದರು. ಪ್ರಸ್ತುತ ಜಗತ್ತಿನ 500 ಉತ್ಕೃಷ್ಟ ಕಂಪನಿಗಳಲ್ಲಿ 30 ಶೇಕಡಾದಷ್ಟು ಜನರು ಭಾರತೀಯರೇ ಸಿಇಒ ಗಳಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಗಮನಿಸಿದರೆ ಭಾರತದ ಯುವ ಪೀಳಿಗೆಯು ಬಹಳಷ್ಟು ಮುಂದುವರೆದಿರುವುದನ್ನು ಕಾಣಬಹುದು. ಈ ನಿಟ್ಟಿನಲ್ಲಿ 2047 ರಲ್ಲಿ ಭಾರತವು ವಿಶ್ವಗುರುವಾಗಬೇಕೆನ್ನುವ ನಮ್ಮ ಸಂಕಲ್ಪ ನಿಜವಾಗುವುದರಲ್ಲಿ ಸಂದೇಹವಿಲ್ಲ. ಇದಕ್ಕೆ ಪೂರಕವಾಗಿ ಭಾರತದ ಪ್ರಸ್ತುತ ಬೆಳವಣಿಗೆಯನ್ನು ಗಮನಿಸಿ ಭವಿಷ್ಯದ ದಿನಗಳಲ್ಲಿ ಉತ್ತಮ ನಾಯಕರನ್ನು ಆಯ್ಕೆ ಮಾಡಿ ಭವ್ಯ ಭಾರತದ ನಿರ್ಮಾಣಕ್ಕೆ ಇಂದಿನ ಯುವ ಪೀಳಿಗೆ ಕೊಡುಗೆಯನ್ನು ನೀಡಬೇಕು ಎಂದು ಮತದಾನದ ಮಹತ್ವವನ್ನು ತಿಳಿಸಿದರು.
ಒಂದು ಸಾವಿರ ಕೊಟ್ಟು ಒಬ್ಬ ಮತದಾರನನ್ನು ಕೊಂಡುಕೊಳ್ಳುತ್ತಾನೆ ಎಂದಾದರೆ ಒಂದು ದಿವಸಕ್ಕೆ ಆ ಮತದಾರನ ಬೆಲೆ ಐವತ್ತು ಪೈಸೆಯಷ್ಟಾಗುತ್ತದೆ. ಹೀಗಿರುವಾಗ ಪ್ರಜಾಪ್ರಭುತ್ವದಲ್ಲಿ ಒಬ್ಬ ಪ್ರಜೆಯ ಬೆಲೆ ಕೇವಲ 50 ಪೈಸೆಗೆ ಅಳತೆ ಮಾಡಿ ತೂಗುವಂತಹ ಪ್ರತಿನಿಧಿಗಳು ಉತ್ತಮವಾದ ಆಡಳಿತವನ್ನು ನೀಡಲು ಹೇಗೆ ಸಾಧ್ಯ? ಈ ನಿಟ್ಟಿನಲ್ಲಿ ಯುವ ಜನತೆ ಜಾಗೃತವಾಗಬೇಕು ಎಂದು ಹೇಳಿದರು.
ವಿಧಾನ ಪರಿಷತ್ತಿನ ಇನ್ನೋರ್ವ ಸದಸ್ಯ ಕಿಶೋರ್ ಕುಮಾರ್ ಬಿ. ಆರ್. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಪಂಚಭೂತಗಳಲ್ಲಿ ಆಕಾಶವು ಎಷ್ಟು ಸಿಡಿಲು ಗುಡುಗು ಮಳೆ ಬಂದರೂ ವಿಚಲಿತವಾಗುವುದಿಲ್ಲ. ಯಾರ ಮೇಲೂ ಕೋಪಿಸಿಕೊಳ್ಳುವುದಿಲ್ಲ. ಅಗ್ನಿಯು ತುಪ್ಪವನ್ನಾಗಲಿ ಕಟ್ಟಿಗೆಯನ್ನಾಗಿ ಎಲ್ಲವನ್ನು ಸಮಾನವಾಗಿ ಆಹುತಿ ತೆಗೆದುಕೊಳ್ಳುತ್ತದೆ. ಈ ಪಂಚಭೂತಗಳಾಗಲಿ ನಮ್ಮ ಸುತ್ತಲಿನ ಪ್ರಕೃತಿಯಾಗಲಿ ಯಾವುದೇ ಸಂದರ್ಭದಲ್ಲಿಯೂ ತಲ್ಲಣಗೊಳ್ಳದೆ, ಉದ್ವೇಗಕ್ಕೊಳಗಾಗದೆ ತಟಸ್ಥವಾಗಿ, ಸಹಜವಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸುವಂತೆ ವಿದ್ಯಾರ್ಥಿಗಳೂ ಕೂಡ ತಟಸ್ಥ ಮನಸ್ಥಿತಿಯಿಂದ ದೇಶದ ವಿದ್ಯಮಾನಗಳನ್ನು ಗಮನಿಸಬೇಕು, ಯಾವುದೇ ಆಮಿಷಗಳಿಗೆ ಬಲಿಯಾಗದೆ, ಉದ್ವೇಗಗಳಿಗೆ ಒಳಗಾಗದೆ ಮತದಾನದ ಮೂಲಕ ಅರ್ಹ ವ್ಯಕ್ತಿಯನ್ನೇ ಆಯ್ಕೆ ಮಾಡಬೇಕು. ಆಗ ಮಾತ್ರ ದೇಶದ ಪ್ರಗತಿ ಸಾಧ್ಯ. ಅನೇಕ ರಾಜ್ಯಗಳಲ್ಲಿ ಈ ಬಗೆಯ ಆಯ್ಕೆಯ ನಾಯಕತ್ವ ದೇಶಕ್ಕೆ ಮಾದರಿಯಾಗಿ ಕಾಣಿಸುತ್ತದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಸಿ. ಡಿ. ಜಯಣ್ಣ ಸ್ಪರ್ಧಾಳುಗಳನ್ನು ಉದ್ದೇಶಿಸಿ ಸೋಲೇ ಗೆಲುವಿನ ಮೆಟ್ಟಿಲು. ಸ್ಪರ್ಧೆಗಳಲ್ಲಿ ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ಸೋಲು ಗೆಲುವುಗಳೆರಡನ್ನು ಸಮಾನವಾಗಿ ಸ್ವೀಕರಿಸಬೇಕು. ಸೋತಾಗ ನೊಂದುಕೊಳ್ಳದೆ ಇನ್ನಷ್ಟು ಭರವಸೆಯನ್ನು ಹೊಂದಿ ಮತ್ತೆ ಮತ್ತೆ ಪ್ರಯತ್ನಿಸಬೇಕು. ನಿರಂತರವಾದ ಪ್ರಯತ್ನದಿಂದ ಯಶಸ್ಸು ಸಾಧ್ಯ ಎಂದು ಹೇಳಿದರು.
ಸ್ವೀಪ್ ಇದರ ಪದವಿ ಪೂರ್ವ ಕಾಲೇಜುಗಳ ನೋಡಲ್ ಅಧಿಕಾರಿಯಾದ ಚಂದ್ರನಾಥ್ ಇವರು ಪ್ರಸ್ತಾವಿಕ ಮಾತುಗಳನ್ನಾಡುತ್ತಾ ಚುನಾವಣೆಗಳು ಪ್ರಜಾಪ್ರಭುತ್ವದ ಹಬ್ಬ. ಇಲ್ಲಿ ಮತದಾನ ಮಾಡುವವರೇ ಪ್ರಭುಗಳು. ಚುನಾವಣಾ ಜಾಗೃತಿಯು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಗತ್ಯ. ಈ ನಿಟ್ಟಿನಲ್ಲಿ ಸ್ವೀಪ್ ಅನೇಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗಾಗಿ ಆಯೋಜಿಸುತ್ತಾ ಬಂದಿದೆ. ಎಲೆಕ್ಟೋರಲ್ ಲಿಟರಸಿ ಕ್ಲಬ್‌ಗಳನ್ನು ಹೈಸ್ಕೂಲು- ಕಾಲೇಜು ಹಂತಗಳಲ್ಲಿ ರಚಿಸಿ ಮತದಾನ ಜಾಗೃತಿಗೆ ಪೂರಕವಾದ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗಾಗಿ ಮಾಡುತ್ತಾ ಬರುತ್ತಿದೆ ಎಂದು ಹೇಳಿದರು.
ಅಧ್ಯಕ್ಷೀಯ ಮಾತುಗಳನ್ನಾಡಿದ ಶಕ್ತಿ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಡಾ. ಕೆ. ಸಿ. ನಾೖಕ್ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಭರವಸೆಯನ್ನು ಹೆಚ್ಚಿಸುತ್ತದೆ. ಸ್ಪರ್ಧೆಗಳಲ್ಲಿ ಪಳಗಿದ ವಿದ್ಯಾರ್ಥಿಗಳು ಬೌದ್ಧಿಕವಾಗಿ ಪಕ್ವಗೊಳ್ಳುತ್ತಾರೆ. ಈ ನೆಲೆಯಲ್ಲಿ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸುವುದಷ್ಟೇ ನಿಮ್ಮ ಉದ್ದೇಶವಾಗದೆ ವೈಯಕ್ತಿಕ ಬೆಳವಣಿಗೆಗಾಗಿ ಇದೊಂದು ಪೂರಕವಾದ ಅವಕಾಶ ಎಂದು ಭಾವಿಸಿ ಸ್ಪರ್ಧಿಸಬೇಕು ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಕ್ತಿ ಪದವಿ ಪೂರ್ವ ಶಿಕ್ಷಣ ಸಂಸ್ಥೆಯ ಸಲಹೆಗಾರರಾದ ರಮೇಶ್ ಕೆ, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶಮೂರ್ತಿ ಎಚ್., ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಬಬಿತ ಸೂರಜ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮಾನ್ಯ ಶೆಟ್ಟಿ ಪ್ರಾರ್ಥನೆ ಮಾಡಿದರು. ಉಪನ್ಯಾಸಕರಾದ ಸಬಿತಾ ಕಾಮತ್ ಸ್ವಾಗತಿಸಿ, ಶಕುಂತಲಾ ಜಯರಾಮ್ ವಂದಿಸಿದರು. ಸುನಿಲ್ ಪಲ್ಲವಿಜಲು ಕಾರ್ಯಕ್ರಮ ನಿರೂಪಿಸಿದರು. 9 ತಾಲೂಕುಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ಕನ್ನಡ ಮತ್ತು ಇಂಗ್ಲಿಷ್ ಪ್ರಬಂಧ ಸ್ಪರ್ಧೆ, ಭಿತ್ತಿ ಚಿತ್ರ ಸ್ಪರ್ಧೆ, ಮತ್ತು ರಸಪ್ರಶ್ನೆ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ವಿವಿಧ ಕಾಲೇಜುಗಳ ಉಪನ್ಯಾಸಕರಾದ ದಿನೇಶ್ ಶೆಟ್ಟಿ ಅಳಿಕೆ, ಅಬ್ದುಲ್ ರಜಾಕ್, ಚಿತ್ರಲೇಖಾ, ಶ್ಯಾಮಲಾ ಇವರು ತೀರ್ಪುಗಾರರಾಗಿ ಸಹಕರಿಸಿದರು.