Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಶಕ್ತಿ ವಿದ್ಯಾ ಸಂಸ್ಥೆಯ ಶಾಲಾ ವಾರ್ಷಿಕೋತ್ಸವ

ಮಂಗಳೂರು : ಶಕ್ತಿನಗರದಲ್ಲಿರುವ ಶಕ್ತಿ ವಿದ್ಯಾ ಸಂಸ್ಥೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಶಕ್ತಿ ರೆಸಿಡೆನ್ಸಿಯಲ್ ಶಾಲಾ ವಾರ್ಷಿಕೋತ್ಸವವು ವಿಜೃಂಭಣೆಯಿಂದ ಜರುಗಿತು.

ಈ ಸಮಾರಂಭದಲ್ಲಿ ಗುಣಶೇಖರ್ ಭಟ್, ಮುಖ್ಯೋಪಾಧ್ಯಾಯರು ಭಗವಾನ್ ಸತ್ಯಸಾಯಿ ವಿದ್ಯಾ ಕೇಂದ್ರ, ಚೊಕ್ಕಾಡಿ, ಸುಳ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ದೀಪವನ್ನು ಬೆಳಗಿಸಿ ನಂತರ ಮಾತನಾಡಿದ ಅವರು ಕೆ.ಸಿ.ನಾೖಕ್‌ರು 6 ವರ್ಷಗಳಲ್ಲಿ ಇಂತಹ ಬೃಹತ್ತಾದ ವಿದ್ಯಾಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಅದರ ಹಿಂದಿನ ಶಕ್ತಿ ಈ ಶಕ್ತಿನಗರದ ಶಕ್ತಿ ಡಾ.ಕೆ.ಸಿ.ನಾೖಕ್‌ರು ಎಂಬುದು ನನಗೆ ಮನವರಿಕೆ ಆಯಿತು. ಒಂದು ಸಂಖ್ಯೆಯನ್ನು ಬರೆಯುವಾಗ ಸೊನ್ನೆಯನ್ನು ಎಷ್ಟು ಬೇಕಾದರೂ ಬರೆಯಬಹುದು. ಅದರ ಎಡದ ಬದಿಯಲ್ಲಿರುವ ಸಂಖ್ಯೆಗಳಿಂದಾಗೆ ಆ ಸೊನ್ನೆಗೂ ಬೆಲೆಬರುತ್ತದೆ. ಭಗವಂತನ ಪ್ರೇರಣೆ ಡಾ.ಕೆ.ಸಿ.ನಾೖಕ್‌ ರವರ ಒಳಗೊಂದು ಶಕ್ತಿಯನ್ನು ತರುತ್ತದೆ. ಆ ಪ್ರೇರಣಾ ಶಕ್ತಿಯಿಂದ ಈ ಶಕ್ತಿ ವಿದ್ಯಾಸಂಸ್ಥೆ ಇಷ್ಟು ದೊಡ್ಡದಾಗಿ ಬೆಳೆದಿದೆ. ಈ ಶಕ್ತಿ ಫೌಂಡೆಶನ್ ಕೋರ್ಸ್‌ನ್ನು ಹೊಸದಾಗಿ ಪರಿಚಯಿಸಲಾಗಿದೆ. ಇದರಿಂದ ಇನ್ನು ಕೆಲವೇ ವರ್ಷಗಳಲ್ಲಿ ಶಕ್ತಿ ವಿದ್ಯಾ ಸಂಸ್ಥೆ ಇನ್ನಷ್ಟು ಮೇಲ್ಮಟ್ಟಕ್ಕೆ ಬರುತ್ತದೆ. ಈ ಶಕ್ತಿ ವಿದ್ಯಾ ಸಂಸ್ಥೆ ದಕ್ಷಿಣಕನ್ನಡದ ಹೆಮ್ಮೆಯಾಗಿದೆ ಎಂದು ಹೇಳಿದರು.

ಮುಂದುವರಿದು ದೈವಪ್ರೀತಿ, ಪಾಪಭೀತಿ ಮತ್ತು ಸಂಘನೀತಿ. ಇವುಗಳನ್ನು ಮಕ್ಕಳು ರೂಢಿಸಿಕೊಳ್ಳಬೇಕು. ತಂದೆ ತಾಯಿಗಳು ನಮ್ಮ ಪ್ರತ್ಯೆಕ್ಷ ದೈವ ಅವರನ್ನು ನಾವು ಸದಾ ಗೌರವಿಸಬೇಕು. ಮನೆಗೆ ಬಂದ ಮಕ್ಕಳಿಗೆ ಪೋಷಕರು ಮೊಬೈಲ್‌ ಅನ್ನು ನೀಡದೆ ಭಾರತೀಯ ಸಂಸ್ಕ್ರತಿಯ ತಳಹದಿಯಲ್ಲಿ ಸಂಸ್ಕಾರವನ್ನು ನೀಡಬೇಕು. ಇಲ್ಲದಿದ್ದರೆ ಮಕ್ಕಳು ಮಾನಸಿಕವಾಗಿ ಸದೃಡರಾಗಿ ಬೆಳೆಯಲು ಸಾಧ್ಯವಾಗುವುದಿಲ್ಲ. ಮಕ್ಕಳು ಕಷ್ಟ ಸುಖಗಳನ್ನು ಅನುಭವಿಸಬೇಕು. ಆಧ್ಯಾತ್ಮಿಕತೆ, ಧಾರ್ಮಿಕತೆಗಳನ್ನು ಬಾಲ್ಯದಿಂದಲೇ ಮಕ್ಕಳ ಮನಸ್ಸಲ್ಲಿ ಬಿತ್ತಿದರೆ ಕಷ್ಟಗಳನ್ನು ಸಹಿಸುವ ಶಕ್ತಿ ಅವರಲ್ಲಿ ಬರುತ್ತದೆ. ಮತ್ತು ಜವಾಬ್ದಾರಿಯನ್ನು ನಿಭಾಯಿಸುವುದನ್ನು ಕಲಿಯುತ್ತಾರೆ ಎಂದು ನೆರೆದಿದ್ದ ಪೋಷಕರಿಗೆ ಕಿವಿಮಾತು ಹೇಳಿದರು.

6 ರಿಂದ 10 ನೇ ತರಗತಿಯ ವರೆಗೆ 2025-26 ನೇ ಶೈಕ್ಷಣಿಕ ವರ್ಷದಿಂದ ಶಕ್ತಿ ಫೌಂಡೇಶನ್ ಕೋರ್ಸ್‌ನ್ನು ಪರಿಚಯಿಸುವ ಶಕ್ತಿ ಫೌಂಡೆಶನ್ ಕೈಪಿಡಿಯನ್ನು ಗುಣಶೇಖರ್ ಭಟ್, ಮುಖ್ಯೋಪಾಧ್ಯಾಯರು ಭಗವಾನ್ ಸತ್ಯಸಾಯಿ ವಿದ್ಯಾ ಕೇಂದ್ರ, ಚೊಕ್ಕಾಡಿ, ಸುಳ್ಯ ಇವರು ಬಿಡುಗಡೆಮಾಡಿದರು.

ಈ ಕೈಪಿಡಿಯ ಕುರಿತಂತೆ ಶಕ್ತಿ ವಿದ್ಯಾಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ ಕೆ. ಅವರು ಮಾತನಾಡಿ ನಮ್ಮ ಶಕ್ತಿ ವಿದ್ಯಾಸಂಸ್ಥೆಯು 2025-26 ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಆರಂಭವಾಗುವಂತಹ 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಶಕ್ತಿ ಫೌಂಡೆಶನ್ ಸಂಬಂಧಪಟ್ಟ ವಾರ್ಷಿಕ ಯೋಜನೆಯುಳ್ಳ ಕೈಪಿಡಿಯು ಮುಂದಿನ ದಿನಮಾನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಮಕ್ಕಳನ್ನು ತಯಾರು ಮಾಡುವ ನಿಟ್ಟಿನಲ್ಲಿ ಶಕ್ತಿ ವಿದ್ಯಾ ಸಂಸ್ಥೆ ನೂತನ ಹೆಜ್ಜೆ ಇಟ್ಟಿದೆ. ದೇಶದಲ್ಲಿ ವಿದ್ಯಾರ್ಥಿಗಳು ಜೆ.ಇ.ಇ. ಹಾಗೂ ನೀಟ್ ಪರೀಕ್ಷೆಗಳನ್ನು ಬರೆಯುತ್ತಾರೆ. ಅದಕ್ಕಾಗಿ ನಮ್ಮ ಮಕ್ಕಳಿಗೆ 6ನೇ ತರಗತಿಯಿಂದ 10ನೇ ತರಗತಿಯ ತನಕ ಈ ಫೌಂಡೇಶನ್ ಕೋರ್ಸ್‌ನ ತರಬೇತಿಯನ್ನು ನೀಡಬೇಕೆಂಬುದು ನಮ್ಮ ಸಂಸ್ಥೆಯ ಸಂಸ್ಥಾಪಕರಾದ ಕೆ.ಸಿ.ನಾೖಕ್‌ರವರ ಕನಸು. ಆ ಕನಸು ನನಸು ಮಾಡಲು ಸಂಸ್ಥೆಯ ಎಲ್ಲಾ ಶಿಕ್ಷಕರು ಸನ್ನದ್ದರಾಗಿ ಮುಂದಿನ ವರ್ಷಕ್ಕೆ ತರಬೇತಿ ಮತ್ತು ಪರೀಕ್ಷೆಯನ್ನು ನಡೆಸುವ ಯೋಜನೆ ಹಾಕಿಕೊಂಡಿದ್ದಾರೆ.

ಮುಂದಿನ ವರ್ಷ 9 ರಿಂದ 10 ನೇ ತರಗತಿಯ ಮಕ್ಕಳಿಗೆ ಸಿಬಿಎಸ್‌ಇ ಬೋರ್ಡ್‌ನ ಎನ್.ಸಿ.ಇ.ಆರ್.ಟಿ. ಪಠ್ಯ ಕ್ರಮಕ್ಕೆ 1200 ಗಂಟೆಗಳನ್ನು ಮೀಸಲಿಟ್ಟರೆ 326 ಘಂಟೆಗಳನ್ನು ನಾವು ಫೌಂಡೇಶನ್ ಕೋರ್ಸ್‌ಗಳಿಗಾಗಿ ಇಟ್ಟಿದ್ದೇವೆ. ಮಾತ್ರವಲ್ಲದೆ ಗಣಕ ಯಂತ್ರಾಧಾರಿತ ಪರೀಕ್ಷೆಗಳನ್ನು ನಡೆಸುವ ಉದ್ದೇಶದಿಂದ ಅದಕ್ಕೆ ಬೇಕಾದ ತರಬೇತಿಗೆ ಸಂಬಂಧಿಸಿದ ಯೋಜನೆಯನ್ನು ಈ ಕೈಪಿಡಿಯಲ್ಲಿ ನೀಡಲಾಗಿದೆ. ಈ ಯೋಜನೆ ಮಕ್ಕಳಿಗೊಂದು ಸುವರ್ಣಾವಕಾಶವಾಗಲಿದೆ. 10 ನೇ ತರಗತಿಯ ನಂತರ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾಭ್ಯಾಸಕ್ಕಾಗಿ ಬೇಕಾಗಿರುವ ಎಲ್ಲಾ ವ್ಯವಸ್ಥೆಯನ್ನು ಆಡಳಿತ ಮಂಡಳಿ ನೀಡುತ್ತದೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ ನಾೖಕ್‌ ರವರು ಮಾತನಾಡಿ ಗೆದ್ದವರು ಬಹುಮಾನ ಪಡೆದುಕೊಂಡರೆ, ಸೋತವರು ಎದೆಗುಂದ ಬಾರದು. ಮುಂದಿನ ಬಾರಿ ಪ್ರಯತ್ನಮಾಡಿ ಬಹುಮಾನ ಪಡೆದುಕೊಳ್ಳಬಹುದು. ಇದು ಜೀವನದ ಒಂದು ಅಂಶ. ಯಾವುದಕ್ಕೂ ನಾವು ಧೈರ್ಯವನ್ನು ಕಳೆದುಕೊಳ್ಳಬಾರದು. ಈ ನೂತನವಾಗಿ ಪರಿಚಯಿಸಿದ ಫೌಂಡೇಶನ್ ಕೋರ್ಸ್‌ನಿಂದ 6 ರಿಂದ 10 ನೇ ತರಗತಿಯ ಮಕ್ಕಳು ಪಿಯುಸಿಗೆ ಬರುವಷ್ಟರಲ್ಲಿ ಸಾಕಷ್ಟು ಪ್ರಯೋಜನ ಪಡೆದಿರುತ್ತಾರೆ. ಹೊಸ ರಾಷ್ಟ್ರೀಯ ನೀತಿಯಲ್ಲಿ ಹೇಳಿರುವ ಹೆಚ್ಚಿನ ಅಂಶಗಳನ್ನು ಪರಿಚಯಿಸಿದ್ದೇವೆ. ಈ ಫೌಂಡೇಶನ್ ಕೋಸ್‌ಗೆ ಸಂಬಂಧಿಸಿದ ಈ ಯೋಜನೆಯ ಯಶಸ್ಸಿಗೆ ಪೋಷಕರ ಸಹಕಾರವನ್ನು ಕೋರುತ್ತಾ ಮಾತಿಗೆ ವಿರಾಮ ನೀಡಿದರು.

ಈ ಸಂಧರ್ಭದಲ್ಲಿ ಆಟೋಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ 2023-24 ನೇ ಸಾಲಿನ ಸಿಬಿಎಸ್‌ಇ ಬೋರ್ಡ್ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸತ್ವಿರ್ ಎಸ್ ರೈ ಮತ್ತು ಯುವರಾಜ್‌ದೀಪ್ ಇವರಿಗೆ ಶಕ್ತಿ ವಿದ್ಯಾ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಶಕ್ತಿ ರೆಸಿಡೆನ್ಸಿಯಲ್ ಶಾಲೆಯ ವರದಿ ವಾಚನವನ್ನು ಸಂಸ್ಥೆಯ ಪ್ರಾಂಶುಪಾಲೆ ಬಬಿತಾ ಸೂರಜ್‌ರವರು ನೇರವೇರಿಸಿದರು. ಈ ಸಂಧರ್ಭದಲ್ಲಿ ಶಕ್ತಿ ವಸತಿ ಪ ಪೂ ಕಾಲೇಜು ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಶಿಕ್ಷಕಿ ಚೇತನಾ ತಲಪಾಡಿಯವರು ನೇರವೇರಿಸಿ, ಶಿಕ್ಷಕ ಭಾಸ್ಕರ್‌ರವರು ಧನ್ಯವಾದವನ್ನು ಸಲ್ಲಿಸಿದರು. ಹಾಗೂ ಕಾರ್ಯಕ್ರಮ ನಿರೂಪಣೆಯನ್ನು ಶಿಕ್ಷಕಿ ಸ್ಮಿಶಾ ಇವರು ನೆರವೇರಿಸಿದರು. ಸಭಾ ಕಾರ್ಯಕ್ರಮದ ನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.