Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಕನ್ನಡ ನಾಡು-ನುಡಿಯ ಬಗ್ಗೆ ಗೌರವವಿರಲಿ – ಡಾ. ಮೀನಾಕ್ಷಿ ರಾಮಚಂದ್ರ

ಮಂಗಳೂರು: ಶಕ್ತಿನಗರದ ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ವಸತಿಯುತ ಶಾಲೆ ಹಾಗೂ ಶಕ್ತಿ ಪ.ಪೂ ಕಾಲೇಜಿನ ವತಿಯಿಂದ ಕನ್ನಡ ರಾಜ್ಯೋತ್ಸವದ ನಿಮಿತ್ತ ಕನ್ನಡ ನಾಡು, ನುಡಿ- ಅಂದು ಇಂದು ಕಾರ್ಯಕ್ರಮದ ಉದ್ಘಾಟನೆ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಬೆಸೆಂಟ್ ಮಹಿಳಾ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಡಾ. ಮೀನಾಕ್ಷಿ ರಾಮಚಂದ್ರ ಮಾತನಾಡಿ ಕನ್ನಡ ನಾಡು ಉಳಿಯಬೇಕಾದರೆ ಕನ್ನಡವನ್ನು ಗೌರವಿಸಬೇಕು. ನಮ್ಮ ಭಾಷೆಯನ್ನು ಮನೆಯಲ್ಲಿ ಮಾತನಾಡಬೇಕು. ಇಂದು ಮಕ್ಕಳಿಗೆ ಮನೆಯಲ್ಲಿ ಇಂಗ್ಲೀಷ್ ಮಾತನಾಡುವುದರ ಮೂಲಕ ಕನ್ನಡದ ಬಗ್ಗೆ ಅಸಡ್ಡೆ ಮೂಡುವ ತರ ಕೆಲವು ಪೋಷಕರು ಮಾಡುತ್ತಿರುವುದು ಸರಿಯಾದ ಪದ್ಧತಿಯಲ್ಲ. ಇತರೆ ಭಾಷೆಗಳು ನಮ್ಮ ವ್ಯವಹಾರಕ್ಕೆ ಮಾತ್ರ ಸೀಮಿತವಾಗಬೇಕೇ ವಿನಃ ಅದನ್ನು ಮಾತೃಭಾಷೆಯಾಗಿ ಮಾತನಾಡಬಾರದೆಂದು ಕರೆ ನೀಡಿದರು. ಕನ್ನಡ ಸಾಹಿತ್ಯ ಇಂದು ಸಾಮಾಜಿಕ ಬದಲಾವಣೆಗೆ ನಾಂದಿಯಾಗಿದೆ. ಕನ್ನಡ ರಾಜ್ಯೋತ್ಸವ ನಿಮಿತ್ತ ಕನ್ನಡ ನಾಡು-ನುಡಿಯ ರಕ್ಷಣೆಯನ್ನು ಮಾಡಲು ಕಟಿಬದ್ಧರಾಗೋಣ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಅನುಪಮಾ ಮಹಿಳಾ ಮಾಸಿಕ ಪತ್ರಿಕೆಯ ಪ್ರಧಾನ ಸಂಪಾದಕಿ ಶ್ರೀಮತಿ ಶಹನಾಝ್ ಎಂ. ಮಾತನಾಡಿ ನಮ್ಮ ಕನ್ನಡ ಭಾಷೆಯ ಬಗ್ಗೆ ಗೌರವವಿರಬೇಕು. ನಾವು ಯಾವುದೇ ಊರಿಗೆ ಹೋದಾಗ ನಮ್ಮ ಭಾಷೆಯನ್ನು ಮಾತನಾಡುವುದನ್ನು ಮರೆಯಬಾರದು. ನಾವು ಬೇರೆ ರಾಜ್ಯಕ್ಕೆ ಹೋದಾಗ ಅಲ್ಲಿಯ ಜನರು ಅವರು ಭಾಷೆಗೆ ಹೆಚ್ಚಿನ ಒತ್ತು ಕೊಡುತ್ತಾರೆ. ಇದರಿಂದ ಅವರ ಭಾಷಾಭಿಮಾನ ನಮಗೆ ಗೊತ್ತಾಗುತ್ತದೆ. ಕನ್ನಡ ನವೆಂಬರ್ 1 ಕ್ಕೆ ಸಿಮಿತ್ತವಾಗದೇ ಜೀವನ ಪೂರ್ತಿ ನಾವು ಕನ್ನಡದ ಬಗ್ಗೆ ಒಲವು ಹೊಂದಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಕ್ತಿ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಪ್ರಭಾಕರ್ ಜಿ.ಎಸ್. ಮಾತನಾಡಿ ಕನ್ನಡ ನಾಡಿನ ಇತಿಹಾಸ 2 ಸಾವಿರ ವರ್ಷಗಳಿಗಿಂತಲೂ ಪುರಾತನವಾದುದು. ಇಂತಹ ಹೆಮ್ಮೆಯ ನಾಡಿನಲ್ಲಿ ಜನ್ಮವೆತ್ತಿರುವ ನಾವೆಲ್ಲರೂ ಪುಣ್ಯವಂತರು, ನಮ್ಮ ಭಾವನೆಗಳ ಅಭಿವ್ಯಕ್ತಿಗೆ ನಮ್ಮ ಮಾತೃಭಾಷೆ ಕನ್ನಡವೇ ಆಧಾರ. ಇಂದಿನ ಯುವ ಪೀಳಿಗೆಯವರು ಕನ್ನಡ ಸಂಸ್ಕೃತಿಯನ್ನು ಉಳಿಸಲು ಹೆಚ್ಚು ಶ್ರಮಿಸಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಇಂಚರ ತಂಡ ಉರ್ವಾ ಇವರಿಂದ ಕನ್ನಡಗೀತೆ ಗಾಯನವು ನಡೆಯಿತು. ಶಕ್ತಿ ಶಾಲೆ ಹಾಗೂ ಪ.ಪೂ.ಕಾಲೇಜಿನ ವಿದ್ಯಾರ್ಥಿಗಳು ಕನ್ನಡಗೀತೆ ಗಾಯನ ನಡೆಸಿ ಕನ್ನಡದ ಕಂಪನ್ನು ಪಸರಿಸಿದರು.

ವೇದಿಕೆಯಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ.ನ್ಮಾಕ್, ಶಕ್ತಿ ಎಜುಕೇಶನ್ ಟ್ರಸ್ಟಿ ಡಾ. ಮುರಳೀಧರ್ ನಾಯ್ಕ್ ಪ್ರಧಾನ ಸಲಹೆಗಾರ ರಮೇಶ್ ಕೆ., ಅಭಿವೃದ್ಧಿ ಅಧಿಕಾರಿ ನಸಿಮ್‌ಭಾನು ಉಪಸಿತ್ಥರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಆಡಳಿತ ಅಧಿಕಾರಿ ಬೈಕಾಡಿ ಜನಾರ್ದನ ಆಚಾರ್, ವಂದಾನರ್ಪಣೆಯನ್ನು ವಿದ್ಯಾರ್ಥಿ ಮಧುರಾಜ್ ಸಲ್ಲಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಅಕ್ಷಯ ಮತ್ತು ನಿರಂಜನ ನಡೆಸಿಕೊಟ್ಟರು.