Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

78 ನೇ ಸ್ವಾತಂತ್ರ್ಯ ದಿನಾಚರಣೆ : ಕೆಲವೇ ವರ್ಷಗಳಲ್ಲಿ ಭಾರತ ಜಗತ್ತಿನ ಅಗ್ರಮಾನ್ಯ ದೇಶವಾಗುತ್ತದೆ

ಮಂಗಳೂರು ಆ. 15 : ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಇಂದು 78 ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಧ್ವಜಾರೋಹಣವನ್ನು ಮಂಗಳೂರಿನ ಖ್ಯಾತ ಲೆಕ್ಕ ಪರಿಶೋಧಕರಾದ ಸಿ.ಎ ಎಸ್.ಎಸ್ ನಾಯಕ್ ನೆರವೇರಿಸಿದರು.

ನಂತರ ಮಾತನಾಡಿದ ಅವರು ಭಾರತ ಜಗತ್ತಿನ ಅಗ್ರಮಾನ್ಯ ದೇಶವಾಗುವುದರಲ್ಲಿ ಸಂದೇಹವಿಲ್ಲ. ಈಗಾಗಲೇ ಆರ್ಥಿಕವಾಗಿ ಜಗತ್ತಿನ 5 ನೇ ಪಟ್ಟಿಯಲ್ಲಿ ಭಾರತವಿರುವುದು ಭವಿಷ್ಯದಲ್ಲಿ ಜಗದ್ಗುರುವಾಗುವ ಲಕ್ಷಣವಾಗಿದೆ ಎಂದು ಅವರು ಹೇಳಿದರು. ನಮ್ಮ ದೇಶ ವಸುದೈವ ಕುಟುಂಬಕಂ ಎಂಬ ಕಲ್ಪನೆಯಂತೆ ನಮ್ಮ ಜಗತ್ತಿನ ಇತರೆ ದೇಶಗಳಿಗೆ ಸಹಾಯ ಮಾಡಲು ಬಜೆಟ್‌ನಲ್ಲಿ 5000 ಕೋಟಿ ಹಣವನ್ನು ಮೀಸಲಿಟ್ಟಿದೆ. ಕೊರೋನಾದ ಸಂದರ್ಭದಲ್ಲಿ ನೆರೆಯ ರಾಷ್ಟ್ರಗಳಿಗೆ ಉಚಿತ ಲಸಿಕೆಯನ್ನು ನೀಡಿದೆ. ನಾವು ನಮ್ಮ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವ ಕಾರ್ಯವನ್ನು ಮಾಡಬೇಕು. ನಾವು ವಿದ್ಯಾರ್ಥಿಗಳು ಆಗಿರುವ ಸಂದರ್ಭದಲ್ಲಿ ಇಂತಹ ಅವಕಾಶಗಳು ಲಭಿಸಿರುವುದು ನಮ್ಮ ಸೌಭಾಗ್ಯ ಎಂದು ಅವರು ಹೇಳಿದರು.

ಶಕ್ತಿ ವಿದ್ಯಾ ಸಂಸ್ಥೆಯು ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣವನ್ನು ನೀಡುವುದು ಅಭಿನಂದನೀಯವಾಗಿದೆ. ಈ ಮೌಲ್ಯಗಳೇ ಮುಂದಿನ ದಿನಗಳಲ್ಲಿ ನಿಮ್ಮನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ ಎಂದು ಅವರು ಹೇಳಿದರು. ಸ್ವಾತಂತ್ರ್ಯ ದಿನ ಎಲ್ಲರಿಗೂ ಶುಭವನ್ನು ತರಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮಾಜಿ ಡಿಜಿಎಮ್ ರಮೇಶ್ಚಂದ್ರ ಪ್ರಭು, ಶಕ್ತಿ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಡಾ.ಕೆ.ಸಿ.ನಾೖಕ್‌, ಸಂಸ್ಥೆಯ ಟ್ರಸ್ಟಿ ಸಗುಣ ಸಿ. ನಾೖಕ್‌ , ಪ್ರಧಾನ ಸಲಹೆಗಾರ ರಮೇಶ್ ಕೆ., ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಮೂರ್ತಿ ಎಚ್. ಮತ್ತು ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ಬಬಿತಾ ಸೂರಜ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ವಂದೇ ಮಾತರಂ ಗೀತೆ, ನಂತರ ರಾಷ್ಟ್ರಗೀತೆ ಮತ್ತು ಧ್ವಜಗೀತೆಯನ್ನು ವಿದ್ಯಾರ್ಥಿಗಳು ಹಾಡಿದರು. ಈ ಕಾರ್ಯಕ್ರಮವನ್ನು ಆಂಗ್ಲ ಶಿಕ್ಷಕಿ ಮರಿಯ ನಿರೂಪಿಸಿದರು.