ಮಂಗಳೂರು ಜು. 17 : ತಲಪಾಡಿಯ ಶಾರದ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ವಿದ್ಯಾ ಭಾರತಿ ಕರ್ನಾಟಕ ದ.ಕ. ಜಿಲ್ಲೆಯ ಮಂಗಳೂರು ವಲಯದ ಒಂದು ದಿನದ ಜಿಲ್ಲಾ ಶೈಕ್ಷಣಿಕ ಸಹಮಿಲನದ ಉದ್ಘಾಟನೆಯನ್ನು ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ. ಸಿ. ನಾೖಕ್ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ನಂತರ ಮಾತನಾಡಿದ ಅವರು ಜಗತ್ತಿನಲ್ಲಿ ಯಾವುದೇ ವ್ಯಕ್ತಿಯು ಮೊದಲಾಗಿ ಗೌರವ ಕೊಡುವುದಿದ್ದರೆ ಅದು ಅವರ ಶಿಕ್ಷಕರಿಗೆ ಆದ್ದರಿಂದ ನಾವು ಬಹಳ ದೊಡ್ಡ ಗುರು ಸ್ಥಾನದಲ್ಲಿರುವುದರಿಂದ ನಮ್ಮಿಂದ ಮಾತ್ರ ಒಬ್ಬ ವಿದ್ಯಾರ್ಥಿಯನ್ನು ದೇಶದ ಸಂಪತ್ತಾಗಿ ರೂಪಿಸಲು ಸಾಧ್ಯ. ಈ ಮಾತನ್ನು ನಾವು ನೆನಪಿನಲ್ಲಿಟ್ಟುಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಗೂ ಶಿಸ್ತು ಮತ್ತು ಸಂಸ್ಕಾರವನ್ನು ಕೊಡುವ ಕೆಲಸ ಮಾಡಬೇಕೆಂದು ಕಿವಿ ಮಾತು ಹೇಳಿದರು. ಪ್ರತಿಯೊಬ್ಬ ವಿದ್ಯಾರ್ಥಿಯ ವ್ಯಕ್ತಿತ್ವವನ್ನು ನಿರ್ಮಾಣ ಮಾಡುವ ಗುರಿ ನಮ್ಮಲ್ಲಿರಬೇಕು. ದೇಶ ಮೊದಲು ಎನ್ನುವುದನ್ನು ಮನದಟ್ಟು ಮಾಡಬೇಕೆಂದು ಶಿಕ್ಷಕರಿಗೆ ಕರೆ ನೀಡಿದರು.







ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾರದ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ.ಬಿ. ಪುರಾಣಿಕ್ ಶಿಕ್ಷಕ ವೃತ್ತಿಯ ಬಗ್ಗೆ ಕೀಳರಿಮೆ ಇರಬಾರದು. ನಾವು ಶಿಕ್ಷಣ ಸಂಸ್ಥೆಯನ್ನು ಪ್ರೀತಿಸಬೇಕು. ಆಗ ಮಾತ್ರ ನಮಗೆ ಸಾಧನೆ ಮಾಡಲು ಸಾಧ್ಯವಾಗುತ್ತದೆ. ನಾವು ವಿದ್ಯಾರ್ಥಿಗಳನ್ನು ತಪ್ಪು ಮಾಡಿದಾಗ ಪ್ರೀತಿಯಿಂದ ತಿದ್ದಬೇಕೆಂದು ಹೇಳಿದರು. ಶಿಕ್ಷಕ ವೃತ್ತಿಗೆ ಗೌರವವನ್ನು ತಂದುಕೊಳ್ಳುವುದು ನಮ್ಮ ಕೈಯಲ್ಲಿದೆ. ಅಂತಹ ಕಾರ್ಯ ವಿದ್ಯಾಭಾರತಿಯಂತಹ ರಾಷ್ಟ್ರೀಯ ವಿಚಾರದಿಂದ ಸಾಧ್ಯವಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಶಾರದ ಸಮೂಹ ಸಂಸ್ಥೆಯ ನಿರ್ದೇಶಕರಾದ ಸಮೀರ್ ಪುರಾಣಿಕ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಪಡೆದಿರುವ ಎಂ.ಬಿ. ಪುರಾಣಿಕ್ರನ್ನು ವಿದ್ಯಾಭಾರತಿ ಕರ್ನಾಟಕ ದ.ಕ. ಜಿಲ್ಲೆಯಿಂದ ಸನ್ಮಾನಿಸಲಾಯಿತು. ನಂತರ ಶಾಲೆ ಮತ್ತು ಪಪೂ ಕಾಲೇಜಿನಲ್ಲಿ ಅತೀ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿದ್ಯಾಭಾರತಿ ಅಖಿಲ ಭಾರತ ಮಟ್ಟದಲ್ಲಿ ಆಯೋಜಿಸಿದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಕೇಂದ್ರ ಸರ್ಕಾರದ SGFI ಕ್ರೀಡಾಕೂಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿದ್ಯಾಭಾರತಿ ಕರ್ನಾಟಕ ದ.ಕ ಜಿಲ್ಲಾ ಅಧ್ಯಕ್ಷರಾದ ಲೋಕಯ್ಯ ಡಿ. ಪ್ರಸ್ತಾವನೆ ಹಾಗೂ ಸ್ವಾಗತವನ್ನು ಮಾಡಿದರು. ವಿದ್ಯಾಭಾರತಿ ಕರ್ನಾಟಕ ದ.ಕ ಜಿಲ್ಲಾ ಕಾರ್ಯದರ್ಶಿ ರಮೇಶ್ ಕೆ. ವಂದನಾರ್ಪಣೆ ಮಾಡಿದರು. ವಿದ್ಯಾಭಾರತಿ ವಿಭಾಗ ಪ್ರಮುಖ ದಯಾನಂದ ಕಟೀಲು ನಿರೂಪಿಸಿದರು.